‘ಶಿಕ್ಷಕರನ್ನು ಭೇಟಿ ಮಾಡಿ’ ಎಂಬುದು ಅರ್ಲಿ ಬರ್ಡ್ ಸಂಸ್ಥೆಯ ಮಾಸಿಕ ಸರಣಿಯಾಗಿದ್ದು, ಭಾರತದಾದ್ಯಂತ ಪಕ್ಷಿಗಳು ಮತ್ತು ಪ್ರಕೃತಿಯನ್ನು ಮಕ್ಕಳಿಗೆ ಪರಿಚಯಿಸುತ್ತಿರುವ ಶಿಕ್ಷಕರ ಕಾರ್ಯವನ್ನು ಪ್ರಸ್ತುತಪಡಿಸುತ್ತದೆ. ಈ ತಿಂಗಳು ಬೆಂಗಳೂರಿನ ಗೋಷಿಯಾ ತಾಜ್ ರವರನ್ನು ಪರಿಚಯಿಸಲಿದ್ದೇವೆ. ಕನ್ನಡ ಬೋಧಿಸುವುದರ ಜೊತೆಗೆ, ಋತುಗಳು, ಹೂವುಗಳು, ಸಸ್ಯಗಳು, ಕೀಟಗಳು, ಪ್ರಾಣಿಗಳು ಮತ್ತು ಪಕ್ಷಿಗಳ ಕುರಿತು ಪಾಠಗಳ ಮೂಲಕ ಮಕ್ಕಳಿಗೆ ಪ್ರಕೃತಿಯ ಅದ್ಭುತಗಳನ್ನು ಇವರು ಪರಿಚಯಿಸುತ್ತಿದ್ದಾರೆ.
ನಿಮ್ಮ ಬಗ್ಗೆ, ನೀವು ಎಲ್ಲಿದ್ದೀರಿ ಮತ್ತು ನಿಮ್ಮ ಕೆಲಸದ ಬಗ್ಗೆ ತಿಳಿಸಿ?
ನನ್ನ ಹೆಸರು ಗೌಸಿಯಾ ತಾಜ್. ನಾನು ಬೆಂಗಳೂರಿನ ಹುರುಳಿ ಚಿಕ್ಕನ ಹಳ್ಳಿಯಲ್ಲಿ ವಾಸಿಸುತ್ತೇನೆ. ನಾನು ದ ಫಿಗ್ ಟ್ರೀ ಲರ್ನಿಂಗ್ ಸೆಂಟರ್ ಅಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ನಮ್ಮ ಸುತ್ತ ಮುತ್ತಲಿನ ಮೂರು ಸರ್ಕಾರಿ ಶಾಲೆಗಳಿಗೆ ಹೋಗಿ, ಅಲ್ಲಿನ ಮಕ್ಕಳಿಗೆ ಕನ್ನಡ ಓದುವುದು ಹಾಗೂ ಬರೆಯುವುದರ ಬಗ್ಗೆ ಕ್ಲಾಸ್ ಮಾಡುತ್ತೇನೆ. ಅದರ ಜೊತೆಗೆ ಪರಿಸರಕ್ಕೆ ಸಂಬಂಧಿಸಿದ ವಿಷಯಗಳಾದ ಕಾಲಗಳು, ಹೂವುಗಳು, ಸಸ್ಯಗಳು, ಕೀಟಗಳು, ಮತ್ತು ಪ್ರಾಣಿ- ಪಕ್ಷಿಗಳ ಬಗ್ಗೆ ಪಾಠ ಮಾಡುತ್ತೇನೆ.

ಚಿತ್ರ ಕೃಪೆ: ಸರೋಜಿನಿ ಎಚ್
ನೀವು ಪಕ್ಷಿ ಪ್ರೇಮಿಯೇ? ಪರಿಸರ/ಪಕ್ಷಿ ವೀಕ್ಷಣೆಯತ್ತ ನಿಮ್ಮನ್ನು ಸೆಳೆಯುವುದು ಯಾವುದು?
ನನಗೆ ಪಕ್ಷಿಗಳೆಂದರೆ ಪ್ರೀತಿ. ಪಕ್ಷಿಗಳು ಗೂಡು ಕಟ್ಟುವುದು, ತಮ್ಮನ್ನು ತಾವು ಸ್ವಚ್ಛಗೊಳಿಸಿಕೊಳ್ಳುವುದು, ನೀರು ಕಂಡಲ್ಲಿ ತಮ್ಮ ಹೊಟ್ಟೆ ಮತ್ತು ರೆಕ್ಕೆಗಳನ್ನು ಒದ್ದೆ ಮಾಡಿಕೊಳ್ಳುವುದು. ಅಷ್ಟೇ ಅಲ್ಲ ಪಕ್ಷಿಗಳು ತಮ್ಮ ತಮ್ಮಲ್ಲೇ ಏನೇನೋ ಮಾತಾಡಿಕೊಳ್ಳುವುದನ್ನು ಕೇಳುವುದು ನನಗೆ ಅವುಗಳನ್ನು ನೋಡಲು ಇನ್ನೂ ಹೆಚ್ಚಿನ ಆಸಕ್ತಿ ಮೂಡಿಸುತ್ತದೆ.

ಪಕ್ಷಿ/ ಪ್ರಕೃತಿ ಶಿಕ್ಷಣದಲ್ಲಿ ನಿಮಗೆ ಯಾವಾಗ ಮತ್ತು ಹೇಗೆ ಆಸಕ್ತಿ ಹುಟ್ಟಿಕೊಂಡಿತು?
ನಾನು ಕಲಿತ ಶಾಲೆಯಲ್ಲಿ ಪರಿಸರದ ಮುಖಾಂತರವೇ ಪಾಠಗಳನ್ನು ಕಲಿಸುತ್ತಿದ್ದರು. ನಮ್ಮ ಶಾಲೆಯ ತೋಟದಲ್ಲಿ ಹಲವಾರು ಮರಗಳಿದ್ದವು. ನಾನು ಶಾಲೆಯಲ್ಲಿ ಓದುವಾಗ ಒಂದೊಂದು ಮರವನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ರಾಖಿ ಕಟ್ಟುತ್ತಿದ್ದೆವು. ಅದು ನಮ್ಮ ಮರವಾಗುತ್ತಿತ್ತು. ಆ ಮರದ ಬಗ್ಗೆ ತುಂಬಾ ಗಮನ ಇಟ್ಟು ಆರೈಕೆ ಮಾಡುತ್ತಿದ್ದೆವು. ಹೀಗೆ ವಾರದಲ್ಲಿ ಒಂದು ದಿನ ಅದರ ಬಳಿ ಕುಳಿತು, ಅದರೊಂದಿಗೆ ಮಾತನಾಡುವುದು, ಅದರ ಬಗ್ಗೆ ಕಾಳಜಿ ವಹಿಸುವುದು, ಅದರ ಮೇಲೆ ಕಥೆ, ಹಾಡು, ಕವನಗಳನ್ನು ಬರೆಯುವುದು, ಮತ್ತು ಅದರಲ್ಲಿ ಕೀಟಗಳಿವೆಯೇ, ಯಾವುದಾದರೂ ಪಕ್ಷಿ ಗೂಡು ಕಟ್ಟಿ ವಾಸಿಸುತ್ತಿದೆಯೇ ಎಂದೆಲ್ಲವನ್ನೂ ಗಮನಿಸುತ್ತಿದ್ದೆವು. ಮತ್ತು ಮರಗಳ ಬಗ್ಗೆ ಏನಾದರು ಕಲಿಸುವುದಿದ್ದರೆ, ಶಿಕ್ಷಕರು ಆ ಮರಗಳ ಹತ್ತಿರವೇ ಕರೆದುಕೊಂಡು ಹೋಗಿ ಆ ಮರವನ್ನು ಸ್ಪರ್ಶಿಸುವ ಮುಖಾಂತರ ಪಾಠ ಮಾಡುತ್ತಿದ್ದರು. ಆದ ಕರಣ ನನಗೆ ಪ್ರಕೃತಿ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿತು.
ಶಿಕ್ಷಣದ ಕ್ಷೇತ್ರದಲ್ಲಿ ನಿಮ್ಮ ಕೆಲಸದ ಮೂಲಕ ನೀವು ಯಾವ ಬದಲಾವಣೆಯನ್ನು ತರಲು ಬಯಸುತ್ತೀರಿ?
ನನ್ನ ವೃತ್ತಿಯ ಮೂಲಕ ಪ್ರತಿದಿನವೂ ಪ್ರಕೃತಿಯ ಬಗ್ಗೆ ಇನ್ನಷ್ಟು ಕಲಿಯಲು ನನಗೆ ಅವಕಾಶ ದೊರೆಯುತ್ತಿದೆ. ಈ ಕಲಿಕೆಯನ್ನು ಮಕ್ಕಳೊಂದಿಗೆ ಹಂಚಿಕೊಳ್ಳಲು ನಾನು ಆಶಿಸುತ್ತೇನೆ. ಹಾಗೂ ಮಕ್ಕಳಲ್ಲಿ ಪರಿಸರವನ್ನು ಗಮನಿಸುವ ಆಸಕ್ತಿ ಬರುವುದು ಮುಖ್ಯ.

ಮಕ್ಕಳು ಪಕ್ಷಿಗಳ ಬಗ್ಗೆ ಕಲಿಯುವುದು ಅಥವಾ ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸುವುದು ಮುಖ್ಯ ಎಂದು ನೀವು ಏಕೆ ನಂಬುತ್ತೀರಿ?
ಮಕ್ಕಳು ಪಕ್ಷಿಗಳ ಬಗ್ಗೆ ಕಲಿಯುವುದು ಮುಖ್ಯ. ಏಕೆಂದರೆ ಮಕ್ಕಳು ಪ್ರಕೃತಿಯ ಮಹತ್ವ ತಿಳಿದರೆ ಪ್ರಕೃತಿಯಲ್ಲಿನ ಜೀವಿಗಳ ಬಗ್ಗೆಯೂ ತಿಳಿದುಕೊಳ್ಳಬೇಕು ಎಂಬ ಆಸಕ್ತಿ ಹುಟ್ಟುತ್ತದೆ. ಹಾಗೂ ಮಕ್ಕಳ ಮನಸ್ಸಿನಲ್ಲಿ ಮನುಷ್ಯರಿಗೆ ಜೀವಿಸಲು ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ಪರಿಸರದ ಪ್ರಾಣಿ, ಪಕ್ಷಿ, ಕೀಟಗಳಿಗೂ ಹಾಗೂ ಎಲ್ಲ ಜೀವರಾಶಿಗಳಿಗೂ ಇದೆ ಎಂದು ತಿಳಿಯುತ್ತದೆ. ನಾವು ಇವುಗಳ ರಕ್ಷಣೆ ಮಾಡಬೇಕು ಹಾಗೂ ಇವುಗಳನ್ನು ಪ್ರೀತಿಸಬೇಕು ಮತ್ತು ಇವುಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಮಕ್ಕಳ ಮನಸ್ಸಿನಲ್ಲಿ ಬರುತ್ತದೆ.
ಪಕ್ಷಿಗಳ ಬಗ್ಗೆ ಕಲಿಸಲು ಯಾವ ಉಪಕರಣಗಳು ಅಥವಾ ಸಂಪನ್ಮೂಲಗಳು ನಿಮಗೆ ಸಹಾಯ ಮಾಡಿವೆ? ಅದರಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ಯಾವುದೇ ವಿಧಾನವನ್ನು ವಿವರಿಸಬಹುದೇ?
ಪಕ್ಷಿಗಳ ಬಗ್ಗೆ ಕಲಿಸುವಾಗ ನಮ್ಮ ಶಾಲೆಯಲ್ಲಿರುವ ಕೆಲವು ಪಕ್ಷಿಗಳಿಗೆ ಸಂಬಂಧ ಪಟ್ಟ ಪುಸ್ತಕಗಳನ್ನು ಉಪಯೋಗಿಸುತ್ತೇವೆ ಮತ್ತು ಯಾವುದೀ ಹಕ್ಕಿ? ಎಂಬ ಪಕ್ಷಿ ಫ್ಲಾಶ್ ಕಾರ್ಡ್ಗಳನ್ನೂ ಬಳಸುತ್ತೇವೆ. ಪಕ್ಷಿಗಳ ಬಗ್ಗೆ ಪಾಠ ಮಾಡುವಾಗ ಯಾವುದೀ ಹಕ್ಕಿ ಕಾರ್ಡ್ ನಮಗೆ ತುಂಬಾ ಉಪಯೋಗವಾಯಿತು. ಇದರಲ್ಲಿ ಮಕ್ಕಳು 20 ಪ್ರಶ್ನೆಗಳ ಆಟ ಆಡುತ್ತಿದ್ದರು. ಪಕ್ಷಿಗಳ ಆಹಾರ, ಅವು ಎಲ್ಲಿ ಇರುತ್ತವೆ, ಮತ್ತು ಅವುಗಳ ಕೊಕ್ಕಿನ ರಚನೆಯನ್ನು ಗಮನಿಸಿ ಕಾರ್ಡಿನಲ್ಲಿ ಆಡುವುದು ತುಂಬಾ ಇಷ್ಟ ಪಡುತ್ತಿದ್ದರು. ಮಕ್ಕಳು ಈ ಕಾರ್ಡ್ ಬಳಸಿ ಒಗಟುಗಳನ್ನೂ ರಚಿಸುತ್ತಿದ್ದರು. ಮಕ್ಕಳು ಆಟ ಮತ್ತು ಗಮನಿಸುವಿಕೆಯ ಮೂಲಕ ಕಲಿಯುವುದನ್ನು ನೋಡುವುದು, ಅತ್ಯಂತ ಸಂತೋಷದಾಯಕ ಮತ್ತು ತೃಪ್ತಿಕರವಾದ ಅನುಭವವಾಗಿದೆ.

ಪಕ್ಷಿ/ ಪ್ರಕೃತಿ ಶಿಕ್ಷಕಿಯಾಗಿ ನೀವು ಯಾವುದೇ ರೀತಿಯ ಸವಾಲುಗಳನ್ನು ಎದುರಿಸಿದ್ದಿರಿಯೇ? ಎದುರಿಸಿದ್ದಲ್ಲಿ, ಅದನ್ನು ಹೇಗೆ ನಿವಾರಿಸಿದ್ದೀರಿ?
ನಾವು ಸರ್ಕಾರಿ ಶಾಲೆಯ 4 ಮತ್ತು 5ನೇ ತರಗತಿಯ ಮಕ್ಕಳಿಗೆ ಪಕ್ಷಿಗಳ ಬಗ್ಗೆ ಪಾಠ ಮಾಡುವಾಗ ಒಂದು ಪಕ್ಷಿಯನ್ನು ಗಮನಿಸಿ ಅದು ಯಾವ ಹಕ್ಕಿ, ಅದು ಏನು ಮಾಡುತ್ತಿತ್ತು, ಮತ್ತು ಅದು ಎಲ್ಲಿ ಇತ್ತು ಎಂದು ಬರೆದುಕೊಂಡು ಬನ್ನಿ, ಬರೆಯಲು ಆಗದಿದ್ದರೆ ಚಿತ್ರ ಬಿಡಿಸಿಕೊಡು ಬಂದರೂ ತೊಂದರೆ ಇಲ್ಲ ಎಂದು ಹೇಳಿದ್ದೆವು.
ಮುಂದಿನ ತರಗತಿಯಲ್ಲಿ ಕೇಳಿದವು. ಮಕ್ಕಳು ಮಾಡದೇ ಬಂದಿದ್ದರು. ಮಕ್ಕಳಿಗೆ ಹೇಗೆ ಬರೆಯುವುದು ಎಂದು ತಿಳಿಯಲಿಲ್ಲ. ನಂತರ ನಾವೇ ನಮ್ಮ ಮನೆಯ ಬಳಿ ಬರುವ ಬುಲ್ಬುಲ್ ಹಕ್ಕಿಯನ್ನು ಉದಾಹರಣೆಯಾಗಿ ಬರೆದುಕೊಂಡು ಹೋಗಿ ಮಕ್ಕಳ ಮುಂದೆ ಓದಿದೆವು. ಬೆಳಗ್ಗೆ 8:30ಕ್ಕೆ ಸೀಬೆ ಗಿಡದಲ್ಲಿ ಕೂತು ಬುಲ್ ಬುಲ್ ಹಕ್ಕಿ ತನ್ನ ಕೊಕ್ಕನ್ನು ರೆಂಬೆಗೆ ಉಜ್ಜುತ್ತಿತ್ತು ಎಂಬುದನ್ನು ಓದಿದೆವು, ಕೆಲವು ಮಕ್ಕಳಿಗೆ ಇದು ಅರ್ಥವಾಯಿತು. ಆದರೆ ಇನ್ನೂ ಕೆಲವರಿಗೆ ಅರ್ಥವಾಗಲಿಲ್ಲ. ಮುಂದಿನ ತರಗತಿಯಲ್ಲಿ ಒಂದು ಅಭ್ಯಾಸ ಪತ್ರಿಕೆ ಮಾಡಿದೆವು. ಅದರಲ್ಲಿ ಹಕ್ಕಿಯ ಹೆಸರು, ಗಮನಿಸಿದ ಸಮಯ, ಮತ್ತು ಏನು ಮಾಡುತ್ತಿತ್ತು ಎಂಬುದನ್ನು ಬರೆಯಲು ತಿಳಿಸಿದೆವು.
ಹಕ್ಕಿಯ ಹೆಸರು ಗೊತ್ತಿಲ್ಲದಿದ್ದರೆ ಅದು ಯಾವ ಬಣ್ಣ ಇದೆ ಹಾಗೂ ಎಷ್ಟು ದೊಡ್ಡದಿದೆ ಎಂದು ಬರೆಯುವುದು. ನಂತರ ಇದಕ್ಕೆ 3-4 ಮಕ್ಕಳು ಮಾತ್ರ ಉತ್ತರ ಬರೆದಿದ್ದರು. ಕಾಗೆ ಹಾರುತಿತ್ತು, ಗುಬ್ಬಚ್ಚಿ ಮರದ ಮೇಲೆ ಕೂತಿತ್ತು ಎಂದೆಲ್ಲಾ.
ನಂತರ ನಾವು ಮಕ್ಕಳಿಗೆ ಪಕ್ಷಿಗಳನ್ನು ಗಮನಿಸಲು ಶಾಲೆಯಲ್ಲೇ ಸ್ವಲ್ಪ ದೂರದಲ್ಲಿ ಒಂದು ಹೊಲವಿತ್ತು, ಅಲ್ಲಿ ಇರುವ ಆಲದ ಹಾಗೂ ಹಲಸಿನ ಮರದ ಬಳಿ ಮಕ್ಕಳನ್ನು ಕರೆದುಕೊಂಡು ಹೋದೆವು. ಮಧ್ಯಾಹ್ನ ಸುಮಾರು 12 ಗಂಟೆಯ ಸಮಯ ಆಗಿತ್ತು. ಅಲ್ಲಿ ಮಕ್ಕಳು ಅಂಬರದ ಹಕ್ಕಿಗಳು ತಂತಿಯ ಮೇಲೆ ಕೂತು ರೆಕ್ಕೆಗಳನ್ನು ಸ್ವಚ್ಛ ಮಾಡಿಕೊಳ್ಳುತ್ತಿದ್ದವು. ಒಂದು ಮಿಂಚುಳ್ಳಿ ಹಲಸಿನ ಮರದ ತುದಿಯಲ್ಲಿ ಕೂತು ತಲೆಯನ್ನು ಒಮ್ಮೆ ಬಲಕ್ಕೆ, ಒಮ್ಮೆ ಎಡಕ್ಕೆ ತಿರುಗಿಸುತಿತ್ತು. ಒಂದು ಕಾಡು ಪಾರಿವಾಳದ ಗುಂಪು ನೆಲದ ಮೇಲೆ ಕುಕ್ಕುತ್ತಾ ಓಡಾಡುವುದನ್ನು ಹಾಗೂ ಅಲ್ಲೇ ಬೇಲಿಯಲ್ಲಿ ಜಿಗಿದಾಡುತ್ತಿದ್ದ ಹಳದಿ ಹೊಟ್ಟೆಯ ಸೂರಕ್ಕಿಗಳನ್ನು ಗಮನವಿಟ್ಟು ಆಸಕ್ತಿಯಿಂದ ನೋಡುತ್ತಿದ್ದರು. ಮಕ್ಕಳಿಗೆ ಇದು ತುಂಬಾ ಉಪಯೋಗವಾಯಿತು.
ನಂತರ ಮಕ್ಕಳೇ ಪರಿಸರದ ಪುಸ್ತಕ ಮಾಡಿ ಅದರಲ್ಲಿ ಅವರು ಯಾವ ಹಕ್ಕಿ ನೋಡಿದರೂ ಕೂಡ ಅದು ಯಾವ ಹಕ್ಕಿ, ಏನು ಮಾಡುತ್ತಿತ್ತು, ಎಂಬುದೆಲ್ಲವನ್ನೂ ಬರೆದಿಟ್ಟರು. ಪಕ್ಷಿಗಳಷ್ಟೇ ಅಲ್ಲ ಕೀಟಗಳ ಬಗ್ಗೆ ಕೂಡ ಬರೆಯುತ್ತಿದ್ದರು.

ಚಿತ್ರ ಕೃಪೆ: ಪ್ರಣವ್ ಎನ್
ಪಕ್ಷಿಗಳು / ಪ್ರಕೃತಿಯ ಬಗ್ಗೆ ಮಕ್ಕಳಿಗೆ ಕಲಿಸುವಲ್ಲಿ ನೀವು ಹೊಂದಿರುವ ಯಾವುದೇ ಸ್ಮರಣಿಯ ಕ್ಷಣ ಅಥವಾ ಅನುಭವವನ್ನು ಹಂಚಿಕೊಳ್ಳಿ.
ಸರ್ಕಾರಿ ಶಾಲೆಯ 4 ಮತ್ತು 5 ನೇ ಮಕ್ಕಳಿಗೆ ಒಂದು ಕಥೆ ಓದುತ್ತಿದ್ದೆ. ಆಗ ಮಧ್ಯದಲ್ಲಿ ಒಂದು ಜಿಗಿಯುವ ಜೇಡ ಬಂದು ಬಿಟ್ಟಿತ್ತು. ಮಕ್ಕಳೆಲ್ಲ ಅದರ ಜಿಗಿತವನ್ನೇ ನೋಡುತ್ತಿದ್ದರು. ಕಥೆಯ ಕಡೆಯಿಂದ ಅವರ ಗಮನ ಹೊರಟು ಹೊಯಿತು. ನಾನು ಕೂಡ ಕಥೆ ನಿಲ್ಲಿಸಿ ಜೇಡವನ್ನು ಗಮನಿಸಿದೆ.
ಆ ಒಂದು ಸಮಯದ್ದಲ್ಲಿ ಮಕ್ಕಳು ತಮ್ಮ ತಮ್ಮಲೇ ಏ ಇದು ಹೇಗೆ ಜಿಗಿತಿದೆಯಲ್ಲಾ? ಇದರ ಕಣ್ಣು ಹೇಗೆ ಹೊಳೆಯುತ್ತಿದೆ, ಏ ಇದು ಕತ್ತು ತಿರುಗಿಸುತ್ತಿದೆ, ಮ್ಯಾಮ್ ಎಷ್ಟು ಚೆನ್ನಾಗಿ ಜಿಗಿಯುತ್ತಿದೆ ನೋಡಿ ಎಂದು ಹೇಳಿದರು. ಇನ್ನೊಂದು ಮಗು ಮ್ಯಾಮ್ ನಾವು ವರ್ಕ್ ಶಾಪ್ ನಲ್ಲಿ ನೋಡಿದೆವಲ್ಲ ಅದೇ ತರ ಇದೆ ಎಂದು ಪಕ್ಕದಲ್ಲಿ ಬಿದ್ದಿದ್ದ ಕಡ್ಡಿಯನ್ನು ತಂದು ತುಂಬಾ ಕಾಳಜಿಯಿಂದ ಜೇಡವನ್ನು ಎತ್ತಿ ಪಕ್ಕಕ್ಕೆ ಬಿಟ್ಟರು.
ಆ ದಿನ ನನಗೆ ತುಂಬಾ ಖುಷಿಯಾಯಿತು. ಏಕೆಂದರೆ ನಾವು ಕುಳಿತುಕೊಳ್ಳುವ ಜಾಗದಲ್ಲಿ ಇರುವೆ ಬಂದರೂ ಅದನ್ನು ಹೊಡೆದು ಬಿಸಾಕುತಿದ್ದರು. ಆದರೆ ಆ ದಿನ ಆ ಜೇಡಕ್ಕೆ ಒಂದು ಶಿಶುವಿಗೆ ತೋರಿಸುವಷ್ಟು ಕಾಳಜಿ ತೋರಿಸಿದರು.

ಪಕ್ಷಿಗಳು ಮತ್ತು ಪ್ರಕೃತಿ ಆಧಾರಿತ ಕಲಿಕೆಯನ್ನು ಶುರು ಮಾಡಿದ ನಂತರ ಮಕ್ಕಳಲ್ಲಿ ಯಾವುದೇ ಬದಲಾವಣೆಗಳನ್ನು ನೀವು ಗಮನಿದ್ದೀರಾ? ಹೌದು ಎಂದಾದರೆ, ಅವು ಯಾವುವು?
ನಾವು ಎಫ್.ಟಿ.ಎಲ್.ಸಿ.ಯಲ್ಲಿ ಸರ್ಕಾರಿ ಶಾಲೆಯ 4 ನೇ ಮತ್ತು 5 ನೇ ತರಗತಿಯ ಮಕ್ಕಳಿಗೆ ಮುಖ್ಯವಾಗಿ ಜೇಡಗಳು ಮತ್ತು ಅವುಗಳ ಬಲೆಯ ಬಗ್ಗೆ ಒಂದು ಕಾರ್ಯಗಾರ ಮಾಡಿದ್ದೆವು.
ಆ ಕಾರ್ಯಾಗಾರದಲ್ಲಿ ಜೇಡದ ಬಿಂಗೋ ಆಟವಿತ್ತು. ಮಕ್ಕಳು ಈ ಆಟವನ್ನು ಗಮನವಿಟ್ಟು ಆಡಿದರು. ಈ ಶೀಟ್ನಲ್ಲಿ ಬೇರೆ ಬೇರೆ ಜೇಡಗಳಿದ್ದವು. ಮಕ್ಕಳು ಸಿಗ್ನೇಚರ್ ಜೇಡವನ್ನು ಚೆನ್ನಾಗಿ ನೆನಪಿನಲಿಟ್ಟುಕೊಂಡಿದ್ದರು. ಏಕೆಂದರೆ ಬಿಂಗೋ ಶೀಟ್ನಲ್ಲಿ ಎಲ್ಲ ಜೇಡಗಳು ಸಿಕ್ಕಿದ್ದವು ಆದರೆ ಸಿಗ್ನೇಚರ್ ಜೇಡ ಸಿಕ್ಕಿರಲಿಲ್ಲ. ಮಕ್ಕಳು ಅದೊಂದು ಜೇಡವನ್ನು ಮನಸಿನಲ್ಲೆ ಇಟ್ಟುಕೊಂಡು ನಂತರದ ದಿನಗಳಲ್ಲಿ ಅದನ್ನು ಹುಡುಕುತ್ತಲೇ ಇದ್ದರು. ಒಂದು ದಿನ ತಮ್ಮ ಶಾಲೆಯ ಆವರಣದಲ್ಲಿ ಅದೇ ಜೇಡವನ್ನು ನೋಡಿ ತುಂಬಾ ಖುಷಿ ಪಟ್ಟರು. ಮತ್ತು ಅದನ್ನು ಸರಿಯಾಗಿ ಗುರುತಿಸಿದರು. ಇದರಿಂದ ಮಕ್ಕಳಲ್ಲಿ ಮೊದಲಿಗಿಂತ ಪರಿಸರದ ಜೀವಿಗಳನ್ನು ಗಮನಿಸುವ ಆಸಕ್ತಿ ಹೆಚ್ಚಾಗಿದೆ ಎಂಬುದನ್ನು ಅರಿತುಕೊಂಡೆ. ಅಷ್ಟೇ ಅಲ್ಲ ಪ್ರತಿ ಬಾರಿ ನಾನು ಮರಳಿ ಶಾಲೆಗೇ ಹೋದಾಗ ಮೊದಲ 10 ನಿಮಿಷಗಳ ಕಾಲ ಅವರು ಈ ಒಂದು ವಾರದಲ್ಲಿ ಯಾವುದೆಲ್ಲ ಕೀಟಗಳು, ಹಕ್ಕಿಗಳು, ಹಾಗೂ ಗಿಡಗಳನ್ನು ನೋಡಿದರು ಎಂದು ಕುಣಿಯುತ್ತ ಕೂಗುತ್ತ ಹೇಳುತ್ತಾರೆ.

ನಿಮ್ಮ ಸಹ ಶಿಕ್ಷಕರಿಗೆ ಅಥವಾ ಪ್ರಕೃತಿ ಶಿಕ್ಷಣವನ್ನು ಪ್ರಾರಂಭಿಸುವವರಿಗೆ ನೀವು ಯಾವ ಸಂದೇಶವನ್ನು ಕೊಡುತ್ತೀರಿ?
ಮಕ್ಕಳೊಂದಿಗೆ ಕೆಲಸ ಮಾಡುವಾಗ, ಒಬ್ಬ ಶಿಕ್ಷಕ/ಶಿಕ್ಷಕಿಯಾಗಿ ಕುತೂಹಲ, ಪ್ರಕೃತಿಯ ಬಗ್ಗೆ ಗೌರವ ಮತ್ತು ತಾಳ್ಮೆ ಬಹಳ ಮುಖ್ಯ ಎಂಬುದನ್ನು ನಾನು ಅರಿತುಕೊಂಡಿದ್ದೇನೆ.
ಮಕ್ಕಳ ಜೊತೆ ಪ್ರಕೃತಿ ನಡಿಗೆಗೆ ಹೋಗುವಾಗ ಮಕ್ಕಳ ಮಾತುಗಳನ್ನು ಕೇಳುವುದುಮಕ್ಕಳನ್ನು ಪ್ರಕೃತಿ ನಡಿಗೆಗೆ ಕರೆದೊಯ್ಯುವಾಗ, ನಮ್ಮ ಪಾತ್ರ ಕೇವಲ ಕಲಿಸುವುದಷ್ಟೇ ಅಲ್ಲ, ಅವರ ಮಾತುಗಳನ್ನು ಆಲಿಸುವುದೂ ಆಗಿರಬೇಕು .ಅದು ಏನು ಮಾಡುತ್ತಿತ್ತು? ಎಂದೆಲ್ಲಾ ಸರಳವಾಗಿ ಮಕ್ಕಳಿಗೆ ಕೇಳಬೇಕು. ಆಗ ಮಕ್ಕಳು ಮಾತನಾಡಲು ಪ್ರಯತ್ನಿಸುತ್ತಾರೆ. ಒಂದು ಮಗುವಿಗೆ ಕೇಳಿದರೆ ಮತ್ತೊಂದು ಮಗು ಕಥೆಯನ್ನು ಹೇಳಲು ಪ್ರಾರಂಭ ಮಾಡುತ್ತದೆ, ಇನ್ನೊಂದು ಮಗು ತನ್ನ ಅನುಭವವೋ ಅಥವಾ ಯಾರಿಂದಲೋ ಕೇಳ್ಪಟ್ಟ ಕಥೆಯನ್ನೋ ಹೇಳಲು ಶುರು ಮಾಡುತ್ತದೆ. ಮಕ್ಕಳಿಗೆ ಹೀಗೆ ಮಾತನಾಡಲು ಅವಕಾಶ ಕೊಡುವುದು ಅತೀ ಮುಖ್ಯ. ಅಷ್ಟೇ ಅಲ್ಲದೆ ಅವರ ಪ್ರತಿಯೊಂದು ಪ್ರಶ್ನೆಯನ್ನು ಕೂಡ ಪ್ರೋತ್ಸಾಹಿಸಬೇಕಾಗುತ್ತದೆ.
