ಅರಿವು ಕೇಂದ್ರಗಳಲ್ಲಿ ಅರಳಿದ ನಿರಂತರ ಪ್ರಕೃತಿ ಕಲಿಕೆ

ಓದುವ ಬೆಳಕು ಆನ್‌ಲೈನ್ ಕಾರ್ಯಕ್ರಮಗಳು ಮತ್ತು ಪ್ರಕೃತಿ ಆಧಾರಿತ ಚಟುವಟಿಕೆಗಳ ಮೂಲಕ, ಅರ್ಲಿ ಬರ್ಡ್ ಕರ್ನಾಟಕದ ಅರಿವು ಕೇಂದ್ರಗಳಲ್ಲಿ ಮಕ್ಕಳನ್ನು ಪಕ್ಷಿಗಳು, ಕೀಟಗಳು, ಸ್ಥಳೀಯ ಜೀವವೈವಿಧ್ಯತೆ ಮತ್ತು ಪ್ರಕೃತಿ ಜರ್ನಲಿಂಗ್ (Nature Journaling) ಗೆ ಪರಿಚಯಿಸುತ್ತಿದೆ. ಈ ಕಲಿಕಾ ಅನುಭವಗಳು ಮಕ್ಕಳಲ್ಲಿ ಕುತೂಹಲ, ಸೂಕ್ಷ್ಮಅವಲೋಕನ ಕೌಶಲ್ಯ ಮತ್ತು ಪ್ರಕೃತಿಯೊಂದಿಗೆ ಆಳವಾದ ಸಂಬಂಧವನ್ನು ಬೆಳೆಸಲು ಸಹಾಯ ಮಾಡುತ್ತಿವೆ.

ಪಕ್ಷಿ ಪ್ರಪಂಚ

ವೈವಿಧ್ಯಯಮಯವಾದ ಆವಾಸಸ್ಥಾನಗಳನ್ನು ಹೊಂದಿರುವ ಕರ್ನಾಟಕದ ರಾಜ್ಯವು, ಅದ್ಭುತವಾದಂತಹ ಹಕ್ಕಿ ಪ್ರಭೇದಗಳ ನೆಲೆಬೀಡಾಗಿದೆ. ನಮ್ಮ ಸುತ್ತಮುತ್ತಲು ಕಂಡುಬರುವ ಸಾಮಾನ್ಯ ಹಕ್ಕಿಗಳನ್ನು ಮಕ್ಕಳಿಗೆ ಪರಿಚಯಿಸುವುದರ ಸಲುವಾಗಿ ‘ಕುತೂಹಲಿ’ ಎಂಬ ಕನ್ನಡ ವಿಜ್ಞಾನ ಪತ್ರಿಕೆಯ ‘ಹಕ್ಕಿಯ ಗೂಡು’ ಎಂಬ ಅಂಕಣಕ್ಕೆ ಹಕ್ಕಿಗಳ ಕುರಿತಾದ ಲೇಖನಗಳನ್ನು ಅರ್ಲಿ ಬರ್ಡ್ ತಂಡವು ನೀಡುತ್ತಿದೆ. ಕರ್ನಾಟಕದಲ್ಲಿ ಸಾಮಾನ್ಯವಾಗಿ ಕಂಡುಬರುವ ಹಕ್ಕಿ ಪ್ರಭೇದಗಳು, ಅವುಗಳ ನಡವಳಿಕೆ ಮತ್ತು ಅವುಗಳ ಬಗೆಗಿನ ಮೋಜಿನ ಸಂಗತಿಗಳನ್ನು ಹೆಚ್ಚು ತಿಳಿದುಕೊಳ್ಳ ಬಯಸುವ ಎಲ್ಲರಿಗೂ ಇದು ಬಹಳ ಪ್ರಯೋಜನಕಾರಿಯಾಗಿದೆ.