ಪ್ರತಿ ಶನಿವಾರ, ಕರ್ನಾಟಕದ ಗ್ರಾಮೀಣ ಭಾಗದ ಸಾವಿರಾರು ಮಕ್ಕಳು ತಮ್ಮ ಸ್ಥಳೀಯ ಅರಿವು ಕೇಂದ್ರಗಳಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮದಲ್ಲಿ  ಭಾಗವಹಿಸುತ್ತಾರೆ. ಆದರೆ ಇಲ್ಲಿ ಕಪ್ಪು ಹಲಗೆಗಳಿಲ್ಲ, ಪರೀಕ್ಷೆಗಳಿಲ್ಲ, ಪಠ್ಯಪುಸ್ತಕಗಳಿಲ್ಲ. ಬದಲಾಗಿ ಮಕ್ಕಳು ಕಥೆಗಳನ್ನು ಕೇಳಲು, ಗಮನಿಸಲು, ಚಿತ್ರ ಬಿಡಿಸಲು, ಚಟುವಟಿಕೆಗಳಲ್ಲಿ ಭಾಗವಹಿಸಲು, ಪ್ರಶ್ನೆಗಳನ್ನು ಕೇಳಲು ಹಾಗೂ ಹೊಸ ವಿಷಯಗಳನ್ನು ಅರಿಯಲು ಒಂದಾಗುತ್ತಾರೆ.

ಸರ್ಕಾರದ ಯೂಟ್ಯೂಬ್ ವಾಹಿನಿಯ ಮೂಲಕ ವಿವಿಧ ಶೈಕ್ಷಣಿಕ ಹಾಗೂ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಈ ಗ್ರಂಥಾಲಯಗಳಿಗೆ ನೇರಪ್ರಸಾರ ಮಾಡಲಾಗುತ್ತದೆ. ಈ ಆನ್‌ಲೈನ್ ಕಾರ್ಯಕ್ರಮಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಸರ್ಕಾರದ ‘ಓದುವ ಬೆಳಕು’ ಕಾರ್ಯಕ್ರಮದ ಭಾಗವಾಗಿದ್ದು, ಗ್ರಾಮೀಣ ಸಮುದಾಯಗಳ ಮಕ್ಕಳಲ್ಲಿ ಓದು ಹಾಗೂ ಕಲಿಕೆಯ ಆಸಕ್ತಿಯನ್ನು ಬೆಳೆಸುವ ಉದ್ದೇಶವನ್ನು ಹೊಂದಿವೆ.

ಈ ಕಾರ್ಯಕ್ರಮದ ಅಂಗವಾಗಿ ಅರ್ಲಿ ಬರ್ಡ್ ತಂಡವು ಪ್ರಕೃತಿ ಆಧಾರಿತ ಹಲವು ಆನ್‌ಲೈನ್ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಈ ಕಾರ್ಯಕ್ರಮಗಳ ಮೂಲಕ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಕ್ಕಳು ಪಕ್ಷಿಗಳು, ಕೀಟಗಳು, ಮರಗಳು ಹಾಗೂ ತಮ್ಮ ಮನೆ ಮತ್ತು ಗ್ರಂಥಾಲಯಗಳ ಸುತ್ತಲಿನ ಅನೇಕ ಪ್ರಕೃತಿಯ ಅದ್ಭುತಗಳನ್ನು ಅರಿಯುತ್ತಿದ್ದಾರೆ. ಜೊತೆಗೆ ಕುತೂಹಲದಿಂದ ತಮ್ಮ ಪ್ರಶ್ನೆಗಳು ಹಾಗೂ ತಾವು ಗಮನಿಸಿದ ಸಂಗತಿಗಳನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದಾರೆ.

19 ಏಪ್ರಿಲ್, 2025

ಪಕ್ಷಿಗಳ ಮಾಯಾಲೋಕ

ನಮ್ಮ ಮೊದಲ ಕಾರ್ಯಕ್ರಮವು ಪಕ್ಷಿಗಳ ಅದ್ಭುತ ಲೋಕದ ಪರಿಚಯದೊಂದಿಗೆ ಆರಂಭವಾಯಿತು. ಪಕ್ಷಿಗಳ ವೈವಿಧ್ಯತೆ ಹಾಗೂ ನಮ್ಮ ದೈನಂದಿನ ಜೀವನದಲ್ಲಿ ಅವುಗಳ ಮಹತ್ವವನ್ನು ಮಕ್ಕಳಿಗೆ ಪರಿಚಯಿಸಲಾಯಿತು. ಗರಿಗಳು, ವಲಸೆ ಹಾಗೂ ಸಾಮಾನ್ಯ ಪಕ್ಷಿಗಳನ್ನು ಗುರುತಿಸುವ ಸರಳ ವಿಧಾನಗಳ ಬಗ್ಗೆ ತಿಳಿಸುವ ಮೂಲಕ ತಮ್ಮ ಸುತ್ತಲಿನ ಪಕ್ಷಿಗಳನ್ನು ಹೆಚ್ಚು ಗಮನಿಸಲು ಮಕ್ಕಳನ್ನು ಪ್ರೋತ್ಸಾಹಿಸಲಾಯಿತು.

ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಸತ್ಯ – ಸುಳ್ಳಿನ  ಆಟವನ್ನು ಆಯೋಜಿಸಲಾಗಿತ್ತು. ಮಕ್ಕಳು ಉತ್ಸಾಹದಿಂದ ಕರೆ ಮಾಡಿ ಪ್ರಶ್ನೆಗಳಿಗೆ ಉತ್ತರಿಸಿದರು. ಕೊನೆಯಲ್ಲಿ ಸರಳ ಆಕಾರಗಳನ್ನು ಬಳಸಿ ಪಕ್ಷಿಗಳನ್ನು ಹೇಗೆ ಚಿತ್ರಿಸಬಹುದು ಎಂಬ ಮನರಂಜನೀಯ ಚಟುವಟಿಕೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.

ಕಾರ್ಯಕ್ರಮವನ್ನು ಇಲ್ಲಿ ವೀಕ್ಷಿಸಿ

15 ನವೆಂಬರ್, 2025

ಪಕ್ಷಿಗಳು ಮತ್ತು ಪರಿಸರ

ಪ್ರಸಿದ್ಧ ಪಕ್ಷಿಶಾಸ್ತ್ರಜ್ಞ ಡಾ. ಸಲೀಂ ಅಲಿ ಅವರ ಜನ್ಮದಿನದ ತಿಂಗಳ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ, ಪಕ್ಷಿಗಳ ಅಧ್ಯಯನಕ್ಕೆ ತಮ್ಮ ಜೀವನವನ್ನು ಸಮರ್ಪಿಸಿದ ವ್ಯಕ್ತಿಗಳ ಬಗ್ಗೆ ಮಕ್ಕಳಿಗೆ ಪರಿಚಯಿಸಲಾಯಿತು. ಸಲೀಂ ಅಲಿ ಅವರ ಬಾಲ್ಯ, ಪಕ್ಷಿಗಳ ಬಗ್ಗೆ ಅವರ ಆಸಕ್ತಿ ಹೇಗೆ ಆರಂಭವಾಯಿತು ಹಾಗೂ ಭಾರತದಲ್ಲಿ ಪಕ್ಷಿಶಾಸ್ತ್ರ ಮತ್ತು ಪಕ್ಷಿ ಸಂರಕ್ಷಣೆಗೆ ಅವರು ನೀಡಿದ ಮಹತ್ವದ ಕೊಡುಗೆಗಳನ್ನು ವಿವರಿಸಲಾಯಿತು. ಜೊತೆಗೆ ನಿಸರ್ಗವಾದಿ  ಜಮಾಲ್ ಅರಾ ಅವರ ಪರಿಚಯ ಮತ್ತು  ಕೆಲಸದ ಕುರಿತೂ ತಿಳಿಸಲಾಯಿತು.

ಡಾ. ಸುಹೇಲ್ ಕ್ವಾದರ್ ಅವರು ರಚಿಸಿರುವ ನೀನು ಮರಕುಟಿಕವೇ ? ಕಥಾಪುಸ್ತಕದ ಓದು ಮಕ್ಕಳಲ್ಲಿ ಚೈತನ್ಯಭರಿತ ಚರ್ಚೆಗೆ ಕಾರಣವಾಯಿತು. ನಂತರ ಮಕ್ಕಳು ನೈಸರ್ಗಿಕ ವಸ್ತುಗಳನ್ನು ಬಳಸಿ ಗೂಡು ನಿರ್ಮಿಸುವುದು, ಪಕ್ಷಿಗಳ ಚಿತ್ರ ಬಿಡಿಸುವುದು ಹಾಗೂ ತಾವು ಗಮನಿಸಿದ ಸಂಗತಿಗಳನ್ನು ದಾಖಲಿಸುವಂತಹ ಚಟುವಟಿಕೆಗಳಲ್ಲಿ ಭಾಗವಹಿಸಿದರು.

ಇದರ ಜೊತೆಗೆ ಸಾಲುಮರದ ತಿಮ್ಮಕ್ಕ ನವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಎಲೆಗಳ ಜರ್ನಲಿಂಗ್  ಚಟುವಟಿಕೆಯನ್ನು ಮಾಡಿಸಲಾಯಿತು. ಇದರ ಮೂಲಕ ಪಕ್ಷಿಗಳು, ಮರಗಳು ಹಾಗೂ ಸ್ಥಳೀಯ ಜೀವವೈವಿಧ್ಯವನ್ನು ಸಂರಕ್ಷಿಸುವ ಮಹತ್ವದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲಾಯಿತು. 

13 ಡಿಸೆಂಬರ್, 2025

ಪಕ್ಷಿ ಹಾಡು

ಡಿಸೆಂಬರ್‌ನಲ್ಲಿ ಕಾರ್ಯಕ್ರಮವು ಪಕ್ಷಿಗಳ ಸಂವಹನ ಹಾಗೂ ಅವುಗಳ ಹಾಡುಗಳತ್ತ ಕೇಂದ್ರೀಕೃತವಾಯಿತು. ಸಾಮಾನ್ಯವಾಗಿ ಕೇಳಿಬರುವ ವಿವಿಧ ಪಕ್ಷಿಗಳ ಧ್ವನಿಮುದ್ರಣಗಳನ್ನು ಮಕ್ಕಳಿಗೆ ಕೇಳಿಸಲಾಯಿತು ಹಾಗೆಯೇ  ಪಕ್ಷಿಗಳು ಏಕೆ ಹಾಡುತ್ತವೆ ಹಾಗೂ ಪ್ರತಿ ಜಾತಿಯ ಪಕ್ಷಿಯ ಧ್ವನಿ ಹೇಗೆ ಭಿನ್ನವಾಗಿರುತ್ತದೆ ಎಂಬುದನ್ನು ತಿಳಿಸಲಾಯಿತು. 

ಪಕ್ಷಿಗಳ ಧ್ವನಿಗಳ ಆಧಾರಿತ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು. ಅನೇಕ ಮಕ್ಕಳು ದೂರವಾಣಿ ಮೂಲಕ ಪಕ್ಷಿಗಳ ಧ್ವನಿಯನ್ನು ಅನುಕರಿಸಲು ಪ್ರಯತ್ನಿಸಿದರು. ಪಕ್ಷಿಗಳ ಕೂಗನ್ನು ನೆನಪಿಟ್ಟುಕೊಳ್ಳಲು ಹಾಗೂ ಗುರುತಿಸಲು ಕೆಲವು ಸರಳ ವಿಧಾನಗಳನ್ನು ಹಂಚಿಕೊಳ್ಳಲಾಯಿತು. ಇದರಿಂದಾಗಿ ಇಡೀ ಕಾರ್ಯಕ್ರಮವು ಚರ್ಚೆಗಳಿಂದ ಉತ್ಸಾಹಭರಿತವಾಗಿತ್ತು

3 ಜನವರಿ, 2026

ಅತ್ತಿ ಹಣ್ಣು ಮತ್ತು ಕಣಜ

ಹೊಸ ವರ್ಷದ ಮೊದಲ ಕಾರ್ಯಕ್ರಮವು ಅತ್ತಿಹಣ್ಣಿನ ಒಳಗೆ ಅಡಗಿರುವ ಒಂದು ಅದ್ಭುತ ಕಥೆಯನ್ನು ಮಕ್ಕಳಿಗೆ ಪರಿಚಯಿಸಿತು. ಅತ್ತಿ ಮರ ಹಾಗೂ ಅತ್ತಿ ಕಣಜ (Fig Wasp) ನಡುವಿನ ವಿಶಿಷ್ಟ ಸಂಬಂಧವನ್ನು ಸರಳವಾಗಿ ವಿವರಿಸಲಾಯಿತು. ಹೊರಗೆ ಹಣ್ಣಿನಂತೆ ಕಾಣುವ ಅತ್ತಿಯೊಳಗೆ ಪರಾಗಸ್ಪರ್ಶ ಹೇಗೆ ನಡೆಯುತ್ತದೆ ಎಂಬುದನ್ನು ಮಕ್ಕಳು ತಿಳಿದುಕೊಂಡರು.

ಕಣಜವು ಅತ್ತಿಯೊಳಗೆ ಮೊಟ್ಟೆ ಇಡುವುದರಿಂದ ಹಿಡಿದು ಅದರ ಸಂಪೂರ್ಣ ಜೀವನಚಕ್ರ ಹಾಗೂ ಪರಾಗಸ್ಪರ್ಶದಲ್ಲಿ ಅದು ವಹಿಸುವ ಅತ್ಯಂತ ಪ್ರಮುಖ ಪಾತ್ರವನ್ನು ಮಕ್ಕಳಿಗೆ ಪರಿಚಯಿಸಲಾಯಿತು. ಜೊತೆಗೆ ಅತ್ತಿಹಣ್ಣು ವರ್ಷಪೂರ್ತಿ ಅನೇಕ ಪ್ರಾಣಿ-ಪಕ್ಷಿಗಳಿಗೆ ಆಹಾರವಾಗಿರುವ ಮಹತ್ವದ ಸಂಪನ್ಮೂಲ ಎಂಬುದನ್ನೂ ತಿಳಿಸಲಾಯಿತು.

ವೀಡಿಯೊಗಳು, ಚರ್ಚೆಗಳು ಹಾಗೂ ಸಾಮಾನ್ಯ ತಪ್ಪು ಕಲ್ಪನೆಗಳನ್ನು ನಿವಾರಿಸುವ ಮೂಲಕ ಈ ವಿಶಿಷ್ಟವಾದ ಸಂಬಂಧವನ್ನು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಹಾಗೂ ಆಸಕ್ತಿದಾಯಕವಾಗಿ ಪರಿಚಯಿಸಲಾಯಿತು.

 

16 ಮೇ 2026

ಪ್ರಕೃತಿಯ ಮಾಯಾಜಾಲ

ಮೇ 2026ರ ವೇಳೆಗೆ ಕಾರ್ಯಕ್ರಮಗಳು ಪಕ್ಷಿಗಳ ಲೋಕವನ್ನು ಮೀರಿ, ಕೀಟಗಳ ಅದ್ಭುತ ಜಗತ್ತಿನತ್ತ ವಿಸ್ತರಿಸಿದವು. ಬೆಂಗಳೂರು ಸಸ್ಟೇನಬಿಲಿಟಿ ಫೋರಂ ಅರಿವು ಕೇಂದ್ರಗಳಿಗೆ ದೇಣಿಗೆಯಾಗಿ ನೀಡಿದ್ದ ಲಿವಿಂಗ್ ಮ್ಯೂಜಿಯಂ (Living Museum) ಪುಸ್ತಕವನ್ನು ಆಧಾರವಾಗಿ ಬಳಸಿಕೊಂಡು, ಮಕ್ಕಳು ಕೀಟಗಳನ್ನು ಹೇಗೆ ಗಮನಿಸಬೇಕು ಮತ್ತು ಅವುಗಳ ವಿಶಿಷ್ಟ ನಡವಳಿಕೆಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬುದನ್ನು ಕಲಿತರು.

ಈ ಕಾರ್ಯಕ್ರಮದಲ್ಲಿ ಮಕ್ಕಳು ಚೀಲದ ಹುಳ, ಎಲೆ ಕತ್ತರಿಸುವ ಜೇನುನೊಣ, ಮಡ್-ಡಾಬರ್ ಕಣಜ ಹಾಗೂ ಬಡಗಿ ಜೇನುನೊಣಗಳ ಬಗ್ಗೆ ತಿಳಿದುಕೊಂಡರು. ಜೊತೆಗೆ ನೈಸರ್ಗಿಕ ವಸ್ತುಗಳನ್ನು ಬಳಸಿ ಚೀಲದ ಹುಳುವಿನ ಹೊದಿಕೆ ಮತ್ತು ಮಣ್ಣಿನ ಕಣಜದ ಗೂಡನ್ನು ತಾವೇ ತಯಾರಿಸುವ ಚಟುವಟಿಕೆಗಳಲ್ಲೂ ಭಾಗವಹಿಸಿದರು. ಕೆಲವೇ ದಿನಗಳಲ್ಲಿ ಗ್ರಂಥಪಾಲಕರು ಮಕ್ಕಳು ತಯಾರಿಸಿದ ಸುಂದರ ಕಲಾಕೃತಿಗಳ ಚಿತ್ರಗಳನ್ನು ಹಂಚಿಕೊಂಡರು. 

ಕಾರ್ಯಕ್ರಮವನ್ನು ಇಲ್ಲಿ ವೀಕ್ಷಿಸಿ

“ನಮ್ಮ ಅರಿವು ಕೇಂದ್ರದ ಮಕ್ಕಳು ಕೀಟಗಳನ್ನು ಗುರುತಿಸುವ ಬಗೆ ಮತ್ತು ಅವುಗಳ ವಿಸ್ಮಯಕಾರಿ ನಡವಳಿಕೆಗಳು ಹಾಗೂ ಪ್ರಕೃತಿಯಲ್ಲಿ ಕೀಟಗಳ ಪಾತ್ರ ಏನೆಂಬುದನ್ನು ಬಹಳ ಕುತೂಹಲದಿಂದ ಕಲಿತು, ಸಂತೋಷಪಟ್ಟರು”

– ಶಿವರಂಜಿನಿ ಹೆಚ್ ಪಿ, ಮೇಲ್ವಿಚಾರಕರು, ಹೂಕುಂದ ಗ್ರಾಮ ಪಂಚಾಯಿತಿ, ಕನಕಪುರ ತಾಲೂಕು, ಬೆಂಗಳೂರು.

30 ಮೇ 2026

ಪ್ರಕೃತಿ ಜರ್ನಲಿಂಗ್ (Nature Journaling) ಪರಿಚಯ

ಜೂನ್ 1ರಿಂದ 7ರವರೆಗೆ ನಡೆಯುವ ಅಂತರರಾಷ್ಟ್ರೀಯ ಪ್ರಕೃತಿ ಜರ್ನಲಿಂಗ್ ವಾರದ ಭಾಗವಾಗಿ ಮತ್ತೊಂದು ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರಕೃತಿ ಜರ್ನಲಿಂಗ್ ಅನ್ನು ಪರಿಚಯಿಸಲಾಯಿತು.

ಮಕ್ಕಳು ತಮ್ಮ ಸುತ್ತಮುತ್ತಲಿನ ಪ್ರದೇಶಗಳಿಂದ ಸಂಗ್ರಹಿಸಿದ್ದ ಎಲೆಗಳು, ಹೂವುಗಳು, ಬೀಜಗಳು ಹಾಗೂ ಇತರ ನೈಸರ್ಗಿಕ ವಸ್ತುಗಳನ್ನು ಕಾರ್ಯಕ್ರಮಕ್ಕೆ ತಂದಿದ್ದರು. ಚಿತ್ರಗಳು, ಗಮನಿಸಿದ ಸಂಗತಿಗಳು, ಪ್ರಶ್ನೆಗಳು ಹಾಗೂ ತಮ್ಮ ವೈಯಕ್ತಿಕ ಅನಿಸಿಕೆಗಳನ್ನು ದಾಖಲಿಸುವ ಮೂಲಕ ಪ್ರಕೃತಿ ಜರ್ನಲಿಂಗ್ ಎಂದರೆ ಕೇವಲ ಸುಂದರ ಚಿತ್ರ ಬಿಡಿಸುವುದು ಅಲ್ಲ; ಬದಲಾಗಿ ಪ್ರಕೃತಿಯನ್ನು ಗಮನಿಸುವುದು ಮತ್ತು ಆಳವಾಗಿ ಯೋಚಿಸಿ ಕುತೂಹಲದಿಂದ ಪ್ರಕೃತಿಯೊಂದಿಗೆ ಒಂದಾಗುವುದು ಎಂಬುದನ್ನು ಅವರು ಅರಿತುಕೊಂಡರು.

ನಂತರ ಗ್ರಂಥಪಾಲಕರು  ಜರ್ನಲ್ ಗಳನ್ನು ಹಂಚಿಕೊಂಡಾಗ ಮಕ್ಕಳು ತಮ್ಮ ಅನುಭವಗಳನ್ನು ಎಷ್ಟು ಸೃಜನಾತ್ಮಕವಾಗಿ ದಾಖಲಿಸಿದ್ದಾರೆ ಎಂಬುದು ಸ್ಪಷ್ಟವಾಗಿತ್ತು. ಕೆಲವು ಗ್ರಂಥಾಲಯಗಳಲ್ಲಿ ವಯಸ್ಕರೂ ಸಹ ಈ ಚಟುವಟಿಕೆಯಲ್ಲಿ ಆಸಕ್ತಿಯಿಂದ ಭಾಗವಹಿಸಿದರು.

ಕಾರ್ಯಕ್ರಮಗಳು ನೇರಪ್ರಸಾರ ಮುಗಿದ ತಕ್ಷಣವೇ ಅಂತ್ಯವಾಗುವುದಿಲ್ಲ.

ಪ್ರತಿ ಹದಿನೈದು ದಿನಗಳಿಗೊಮ್ಮೆ, ಶುಕ್ರವಾರದಂದು, ಗ್ರಂಥಪಾಲಕರಿಗೆ “Friday Funday” ಎಂಬ ಸರಳ ಪ್ರಕೃತಿ ಆಧಾರಿತ ಚಟುವಟಿಕೆಗಳನ್ನು ವಾಟ್ಸಾಪ್ ಮೂಲಕ ಕಳುಹಿಸಲಾಗುತ್ತದೆ. ಪ್ರತಿಯೊಂದು ಚಟುವಟಿಕೆಯೊಂದಿಗೆ ಒಂದು ಚಿಕ್ಕ ಮಾರ್ಗದರ್ಶಿ ವೀಡಿಯೊ ಹಾಗೂ ಮುದ್ರಿಸಬಹುದಾದ ಚಟುವಟಿಕೆ ಹಾಳೆಯನ್ನೂ ಕಳಿಸಲಾಗುತ್ತದೆ. ಮಕ್ಕಳು ತಮ್ಮ ಅನುಕೂಲಕ್ಕೆ ತಕ್ಕಂತೆ ಈ ಚಟುವಟಿಕೆಗಳನ್ನು ಪೂರ್ಣಗೊಳಿಸಬಹುದು. ಇದರಿಂದ ನೇರಪ್ರಸಾರದ ಕಾರ್ಯಕ್ರಮಗಳ ನಡುವೆಯೂ ಪ್ರಕೃತಿಯನ್ನು ಗಮನಿಸುವ ಅಭ್ಯಾಸ ನಿರಂತರವಾಗಿ ಮುಂದುವರಿಯುತ್ತದೆ.

ಕೆಲವು ಚಟುವಟಿಕೆಗಳು ಮಕ್ಕಳನ್ನು ಪಕ್ಷಿಗಳನ್ನು ಗಮನಿಸಲು ಪ್ರೋತ್ಸಾಹಿಸಿದರೆ, ಇನ್ನೂ ಕೆಲವು ಕೀಟಗಳನ್ನು ಹುಡುಕಲು, ಎಲೆಗಳನ್ನು ಪರಿಶೀಲಿಸಲು ಅಥವಾ ಋತುಮಾನಕ್ಕೆ ಅನುಗುಣವಾಗಿ ಪ್ರಕೃತಿಯಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಲು ಪ್ರೇರೇಪಿಸುತ್ತವೆ.

ಎಲ್ಲಾ ಅರಿವು ಕೇಂದ್ರಗಳಲ್ಲೂ ಪಾಲ್ಗೊಳ್ಳುವಿಕೆ ಒಂದೇ ರೀತಿಯಲ್ಲದಿದ್ದರೂ, ಈ ಚಟುವಟಿಕೆಗಳನ್ನು ನಿಯಮಿತವಾಗಿ ನಡೆಸುತ್ತಿರುವ ಕೇಂದ್ರಗಳಲ್ಲಿ ಪರಿಣಾಮಗಳು ಸ್ಪಷ್ಟವಾಗಿ ಕಾಣಿಸುತ್ತಿವೆ. ಮಕ್ಕಳು ಹಿಂದೆ ಗಮನಿಸದೇ ಹೋಗುತ್ತಿದ್ದ ಅನೇಕ ಸಂಗತಿಗಳನ್ನು ಈಗ ಸೂಕ್ಷ್ಮವಾಗಿ ಗಮನಿಸಲು ಆರಂಭಿಸಿದ್ದಾರೆ. ಹತ್ತಿರವೇ ಗೂಡು ಕಟ್ಟಿರುವ ಪಕ್ಷಿ, ಗೋಡೆಯ ಮೇಲೆ ಕಂಡುಬಂದ ಅಪರೂಪದ ಕೀಟ, ಅಥವಾ ಋತು ಬದಲಾದಂತೆ ಮರಗಳ ಎಲೆಗಳ ಬಣ್ಣದಲ್ಲಿ ಉಂಟಾಗುವ ಬದಲಾವಣೆಗಳು.


“ಅರ್ಲಿ ಬರ್ಡ್ ಚಟುವಟಿಕೆಗಳು ಮತ್ತು ಆನ್ಲೈನ್ ಕಾರ್ಯಕ್ರಮಗಳೆಂದರೆ ಮಕ್ಕಳಿಗೆ ಮತ್ತು ನನಗೆ ಬಹಳ ಇಷ್ಟ. ಯಾವುದೇ ಚಟುವಟಿಕೆ ನೀಡಿದರೂ ಮೊದಲು ನಾನು ಮಾಡಿ ನಂತರ ಮಕ್ಕಳಿಗೆ ಮಾಡಿಸುವೆ. ನಮ್ಮ ಅರಿವು ಕೇಂದ್ರಕ್ಕೆ ಬರುವ ಮಕ್ಕಳೆಲ್ಲರೂ ನಮಗೆ ಅರ್ಲಿ ಬರ್ಡ್ ಚಟುವಟಿಕೆಯನ್ನೇ ಮಾಡಿಸಿ ಎಂದು ಬಹಳ ಆಸಕ್ತಿ ತೋರಿಸುತ್ತಾರೆ”

– ಚೈತ್ರ ಟಿ, ಮೇಲ್ವಿಚಾರಕರು, ಶಿವನಹಳ್ಳಿ ಗ್ರಾಮ ಪಂಚಾಯಿತಿ, ಕನಕಪುರ ತಾಲೂಕು, ಬೆಂಗಳೂರು ದಕ್ಷಿಣ ಜಿಲ್ಲೆ.


“ನಮ್ಮ ಅರಿವು ಕೇಂದ್ರಕ್ಕೆ ಬರುವ ಮಕ್ಕಳಿಗೆ ಶುಕ್ರವಾರದ ಚಟುವಟಿಕೆಗಳು ಬಹಳ ಇಷ್ಟವಾಗುತ್ತವೆ. ಸರಳವಾಗಿ ಮತ್ತು ಆಸಕ್ತಿದಾಯಕವಾಗಿರುವುದರಿಂದ ಮಕ್ಕಳು ಖುಷಿಯಿಂದ ಪರಿಸರದ ಬಗ್ಗೆ ಕಲಿಯುತ್ತಾರೆ”

– ಯೋಗೇಶ್ ಪಿ, ಮೇಲ್ವಿಚಾರಕರು, ಉಮ್ಮಡಹಳ್ಳಿ ಗ್ರಾಮ ಪಂಚಾಯಿತಿ, ಮಂಡ್ಯ ಜಿಲ್ಲೆ.

ಆನ್‌ಲೈನ್ ಕಾರ್ಯಕ್ರಮಗಳ ಸರಣಿಯಾಗಿ ಆರಂಭವಾದ ಈ ಪ್ರಯಾಣ ಇಂದು ಇನ್ನಷ್ಟು ಅರ್ಥಪೂರ್ಣ ರೂಪ ಪಡೆದುಕೊಂಡಿದೆ. ಕರ್ನಾಟಕದ ವಿವಿಧ ಭಾಗಗಳ ಅರಿವು ಕೇಂದ್ರಗಳು ಈಗ ಕೇವಲ ಓದುವ ಸ್ಥಳಗಳಷ್ಟೇ ಆಗಿರದೆ, ಪ್ರಕೃತಿಯನ್ನು ಅನುಭವಿಸಿ, ಗಮನಿಸಿ, ಅದರೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳುವ ಕಲಿಕಾ ಕೇಂದ್ರಗಳಾಗಿ ರೂಪಾಂತರಗೊಳ್ಳುತ್ತಿವೆ. ಕಥೆಗಳು, ಗಮನಿಸುವಿಕೆ, ಸಂವಾದಗಳು ಹಾಗೂ ಚಟುವಟಿಕೆಗಳ ಮೂಲಕ ಮಕ್ಕಳು ತಮ್ಮ ಸುತ್ತಲಿನ ಪರಿಸರವನ್ನು ಇನ್ನಷ್ಟು ಸೂಕ್ಷ್ಮವಾಗಿ ನೋಡಲು ಕಲಿಯುತ್ತಿದ್ದಾರೆ. ಈ ಸುಂದರವಾದ ಪ್ರಕ್ರಿಯೆಯಲ್ಲಿ  ಪ್ರಕೃತಿಯೊಂದಿಗೆ ಜೀವಮಾನದ ಬಾಂಧವ್ಯವನ್ನು ಕ್ರಮೇಣವಾಗಿ ಬೆಳೆಸಿಕೊಳ್ಳುತ್ತಿದ್ದಾರೆ.

ಎಲ್ಲಾ YouTube ಕಾರ್ಯಕ್ರಮಗಳನ್ನು ವೀಕ್ಷಿಸಿ ಮತ್ತು ಶುಕ್ರವಾರದ ಚಟುವಟಿಕೆಗಳನ್ನು ಡೌನ್‌ಲೋಡ್ ಮಾಡಿ

Leave a Reply

Your email address will not be published. Required fields are marked *